ಪ್ರಮದ್ವತಿ
ವಿಶ್ವಾವಸುವೆಂಬ ಗಂಧರ್ವನಿಂದ ಮೇನಕೆಯಲ್ಲಿ ಜನಿಸಿದವಳು. ಮಗುವಾಗಿದ್ದಾಗಲೇ ತಾಯಿಯಿಂದ ಪರಿತ್ಯಕ್ತಳಾಗಿ ಸ್ಥೂಲಕೇಶನೆಂಬ ಮುನಿಯ ಆರೈಕೆಯಲ್ಲಿ ಬೆಳೆದಳು. ಪ್ರಾಪ್ತವಯಸ್ಕಳಾದಾಗ ಒಮ್ಮೆ ಚ್ಯವನ ಮುನಿಪುತ್ರನಾದ ಪ್ರಮತಿ ಎಂಬುವನಿಂದ ಘೃತಾಚಿಯೆಂಬ ಅಪ್ಸರಸಿಯಲ್ಲಿ ಜನಿಸಿದ ರುರು ಮಹರ್ಷಿಯನ್ನು ಊರ್ಜಸ್ವತಿಯ ತೀರದಲ್ಲಿ ನೋಡಿದಳು. ಪರಸ್ಪರ ಪ್ರೇಮಾಂಕುರವಾಯಿತು. ಆಗ ರುರು ಇವಳನ್ನು ತನ್ನ ಪತ್ನಿಯಾಗೆಂದು ಕೇಳಿದಾಗ ತನ್ನ ತಂದೆಯನ್ನು ಕೇಳಿ ತನ್ನನ್ನು ಪಡೆಯಿರಿ ಎಂದು ಹೇಳಿದಳು. ರುರು ತನ್ನ ಆಶ್ರಮಕ್ಕೆ ಹಿಂತಿರುಗಿ ತಂದೆಗೆ ತನ್ನ ಆಸೆಯನ್ನು ತಿಳಿಸಿದ. ಹಿರಿಯರಿಬ್ಬರೂ ಸೇರಿ ಉತ್ತರಾನಕ್ಷತ್ರದಲ್ಲಿ ಮದುವೆ ನಡೆಯುವಂತೆ ಏರ್ಪಡಿಸಿದರು. ಮದುವೆಯ ಹಿಂದಿನ ದಿನ ಮದುಮಗಳು ಒಂದು ಹೂವಿನ ಪೊದೆಯ ಬಳಿ ಹೋಗುತ್ತಿದ್ದಾಗ ಒಂದು ಹಾವು ಕಚ್ಚಿ ಸತ್ತಳು. ರುರುವಿನ ದುಃಖಕ್ಕೆ ಎಲ್ಲೆಯಿಲ್ಲವಾಗಿ ಹುಟ್ಟಿದಾಗಿನಿಂದ ಇದುವರೆಗೆ ತಪ್ಪದೆ ತಾನು ಸುಕೃತಗಳನ್ನೆಸಗಿ ತಪೋಬಲವನ್ನು ಗಳಿಸಿದ್ದರೆ ತನ್ನ ಪ್ರಿಯೆ ಮತ್ತೆ ಜೀವಿಸಲಿ ಎಂದು ತನ್ನ ತಪೋಬಲವನ್ನು ಪರೀಕ್ಷೆಗೆ ಒಡ್ಡಿದ. ಆಗ ದೇವೇಂದ್ರನೇ ಪ್ರತ್ಯಕ್ಷನಾಗಿ ನಿನ್ನ ಆಯುಷ್ಯದಲ್ಲಿ ಅರ್ಧವನ್ನು ಇವಳಿಗೆ ಕೊಡುವುದಾದರೆ ಇವಳನ್ನು ಬದುಕಿಸುವೆ ಎಂದ. ರುರು ಅದಕ್ಕೆ ಸಂತೋಷದಿಂದ ಒಪ್ಪಿದ. ಪ್ರಮದ್ವತಿ ಬದುಕಿದಳು. ವಿವಾಹ ಆಯಿತು. ಸುಖದ ಸಂತಸದ ಜೀವನ ಮುಂದುವರಿಯಿತು. ಒಂದು ಶುಭ ಮುಂಜಾನೆ ರುರು ಪ್ರಮದ್ವತಿಯರಿಬ್ಬರೂ ಸ್ನಾನಮಾಡಿ ದೈವಸಾನ್ನಿಧ್ಯದಲ್ಲಿ ಜೊತೆಯಲ್ಲಿ ಪೂಜೆ ನಡೆಸಿ ಪರಸ್ಪರ ಪ್ರೀತಿಯಿಂದ ಕೈಗೆ ಕೈ ಹಚ್ಚಿ ಕುಳಿತು ಹಾಗೆಯೇ ಅಸುನೀಗಿದರು.
(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ